ಛೋಟಾ ನಾಗಪುರ -
ಭಾರತದಲ್ಲಿರುವ ಬಿಹಾರ ರಾಜ್ಯದ ಒಂದು ವಿಭಾಗ. ಇದಕ್ಕೆ ಸ್ಥೂಲವಾಗಿ ಸಮಾನ ವ್ಯಾಪಿಯಾಗಿರುವ ಪ್ರಸ್ಥಭೂಮಿಗೂ ಇದೇ ಹೆಸರಿದೆ. ರಾಂಚಿ, ಹeóÁರಿಬಾಗ್, ಪಲಮಾವ್, ಸಿಂಫ್‍ಭೂಮ್ ಮತ್ತು ರನ್‍ಬಾದ್ ಜಿಲ್ಲೆಗಳನ್ನೊಳಗೊಂಡಿರುವ ಛೋಟಾ ನಾಗಪುರ ವಿಭಾಗದ ವಿಸ್ತೀರ್ಣ ಸು. 65,600 ಚ.ಕಿ.ಮೀ. ಜನಸಂಖ್ಯೆ ಸು. 1,10.22.925 (1971).

	ಗಂಗಾ, ಸೋನ್ ಮತ್ತು ಮಹಾನದಿ ಬಯಲುಗಳ ನಡುವೆ ಹಬ್ಬಿರುವ ಛೋಟಾ ನಾಗಪುರ ಪ್ರಸ್ಥಭೂಮಿಯ ಸರಾಸರಿ ಎತ್ತರ 3,500'. ಸ್ಫಟಿಕ ಶಿಲೆಯಿಂದ ಕೂಡಿದ ಈ ಪ್ರದೇಶದ ನಡುವೆ ದಾಮೋದರ್ ಕಣಿವೆಯ ಅವಸಾದೀ ಶಿಲಾಭಾಗವುಂಟು. ಇಡೀ ಪ್ರದೇಶ ತಂಪಾದ ವಾಯುಗುಣದಿಂದ ಕೂಡಿದ್ದು. ಈ ಪ್ರದೇಶದ ಮಧ್ಯ ಮತ್ತು ಪಶ್ಚಿಮ ಭಾಗಗಳು ಅರಣ್ಯಾವೃತ್ತವಾಗಿವೆ. ಈ ಅರಣ್ಯಕ್ಷೇತ್ರದಲ್ಲಿ ಒಂದು ಕಡೆ ಕುರುಚಲುಗಿಡಗಳ ಕಾಡುಗಳೂ (ಉದಾ: ಗಿರಿಡೀಹ್ ಮತ್ತು ಧನ್‍ಬಾದ್‍ಗಳಲ್ಲಿ) ಮತ್ತೊಂದು ಕಡೆ ಸಾಲುವೃಕ್ಷಗಳ ವಿಶಾಲ ಅರಣ್ಯಗಳೂ (ಉದಾ; ಸಿಂಘ್‍ಭೂಮ್‍ನಲ್ಲಿದೆ) ಇವೆ. ಒಟ್ಟಿನಲ್ಲಿ ಈ ಪ್ರದೇಶ ಅರಣ್ಯಗಳಿಂದಲೂ, ಬೆಟ್ಟಗುಡ್ಡಗಳಿಂದಲೂ ಕಣಿವೆಗಳಿಂದಲೂ ಕೂಡಿದ್ದು, ಇಲ್ಲಿ ಹರಿಯುವ ಕೋಯೆಲ್, ಸುವರ್ಣರೇಖಾ, ಸಂಜಯಿ ಮುಂತಾದ ನದಿಗಳು ಇದನ್ನು ಸಂಪದ್ಯುಕ್ತವಾಗಿ ಮಾಡಿದೆ. ಈ ನದೀ ಪಾತ್ರಗಳಲ್ಲಿ ತಿಲೈಯ, ಕೋನಾರ್, ಮೈತಾನ್, ಪಂಚೇತ್ ಕಟ್ಟೆಗಳನ್ನೂ ಬೊಕಾರೊದಲ್ಲಿ ಒಂದು ಬೃಹತ್ ಉಷ್ಣವಿದ್ಯುತ್ ಕೇಂದ್ರವನ್ನು ನಿರ್ಮಿಸಲಾಗಿದೆ.

	ಸೌದೆ ಮತ್ತು ಗಟ್ಟಿಯಾದ ಮರದ ದಿಮ್ಮಿಗಳಿಗೆ ಇಲ್ಲಿಯ ಅರಣ್ಯಗಳು ಹೆಸರುವಾಸಿಯಾಗಿವೆ. ಕಾಗದದ ಉತ್ಪಾದನೆಗೆ ಅಗತ್ಯವಾದ ಬೊಂಬು ಮತ್ತು ಹುಲ್ಲನ್ನು ಅರಣ್ಯಗಳು ಒದಗಿಸುತ್ತವೆ. ಅರಗು ಮತ್ತು ಟುಸಾ ರೇಷ್ಮೆ ಇಲ್ಲಿಯ ಮುಖ್ಯ ಅರಣ್ಯೋತ್ಪನ್ನಗಳು. ಭಾರತದಲ್ಲಿ ಉತ್ಪಾದನೆಯಾಗುವ ಅರಗಿನಲ್ಲಿ ಸುಮಾರು ಅರ್ಧಭಾಗ ಇಲ್ಲಿ ದೊರೆಯತ್ತದೆ. ಆದರೆ ಈಚೆಗೆ ರಾಸಾಯನಿಕ ಉತ್ಪನ್ನಗಳು ಮಾರುಕಟ್ಟೆಯನ್ನು ಪ್ರವೇಶಿಸುತ್ತಿರುವುದರಿಂದಲೂ ಥೈಲ್ಯಾಂಡ್ ಮುಂತಾದ ರಾಷ್ಟ್ರಗಳು ನೈಸರ್ಗಿಕ ಅರಗು ಉತ್ಪಾದಿಸುತ್ತಿರುವುದರಿಂದಲೂ ಈ ಉದ್ಯಮ ಇಳಿಮುಖವಾಗಿದೆ.

	ಈ ವಲಯದಲ್ಲಿಯ ಭೂಮಿ ಅಷ್ಟೇನೂ ಫಲವತ್ತಾಗಿಲ್ಲ. ಮರಳು ತುಂಬಿದ ಅಥವಾ ಜೇಡಿಯ ಕೆಂಪು ಮಣ್ಣಿನ ಭೂಮಿಯೇ ಹೆಚ್ಚಾಗಿ ಕಾಣದೊರೆಯುತ್ತದೆ. ಇದು ಅಷ್ಟೇನೂ ಫಲವತ್ತಾದ್ದಲ್ಲ. ಬತ್ತ, ಮೆಕ್ಕೆಜೋಳ, ದ್ವಿದಳ ಧಾನ್ಯಗಳೂ, ಎಣ್ಣೆಬೀಜಗಳು, ಸಾಸಿವೆ-ಇವು ಇಲ್ಲಿಯ ಮುಖ್ಯ ಬೆಳೆಗಳು, ಇಲ್ಲಿ 50"-60" ಮಳೆಯಾಗುತ್ತದೆ.

	ಈ ಪ್ರದೇಶದಲ್ಲಿ ಅನೇಕ ಖನಿಜ ನಿಕ್ಷೇಪಗಳಿವೆ. ಹeóÁರಿಬಾಗ್‍ನಲ್ಲಿನ ಅಭ್ರಕದ ಗಣಿಗಳು ಹಾಗೂ ದಾಮೋದರ ಕಣಿವೆಯ ಕಲ್ಲಿದ್ದಲಿನ ಗಣಿಗಳು ಮುಖ್ಯವಾದವು. ವಿಶ್ವದ ಅಭ್ರಕದ ಉತ್ಪಾದನೆಯಲ್ಲಿ ಭಾರತಕ್ಕೆ ಪ್ರಥಮ ಸ್ಥಾನಗಳಿಸಿಕೊಟ್ಟಿರುವ ಅಭ್ರಕ ಗಣಿಗಳು ಭಾರತದ ಒಟ್ಟು ಉತ್ಪಾದನೆಯ ಶೇ. 40-50ರಷ್ಟು ಅಭ್ರಕ ಉತ್ಪಾದಿಸುತ್ತವೆ. ಗಣಿಗಾರರ ಸಂಖ್ಯೆ 20,000 ಕ್ಕೂ ಹೆಚ್ಚು. ಇದರ ಸಂಸ್ಕರಣ ಪ್ರಕ್ರಿಯೆಗಳಲ್ಲಿ ಇದರ ಮೂರು ಪಟ್ಟು ಹೆಚ್ಚು ಜನ ನಿರತರಾಗಿದ್ದಾರೆ. ಇದರಲ್ಲಿ ತೊಡಗಿರುವ ಮಹಿಳಾ ಕಾರ್ಮಿಕರು ಮತ್ತು ಮಕ್ಕಳು ಈ ಕಾರ್ಯದಲ್ಲಿ ಎಷ್ಟು ಕುಶಲರಾಗಿದ್ದಾರೆಂದರೆ 1"/1000ರಷ್ಟು ತೆಳುವಾದ ಅಭ್ರಕದ ಪದರಗಳನ್ನು ಅವರು ಬಿಡಿಸಬಲ್ಲರು. ಇದುವರೆಗೆ ಕಂಡುಹಿಡಿಯಲಾಗಿರುವ ಯಾವ ಯಂತ್ರವೂ ಇಷ್ಟು ಸೂಕ್ಷ್ಮವಾದ ಕಾರ್ಯ ಮಾಡಲಾರದೆಂದು ಹೇಳಲಾಗಿದೆ. ಈ ವಲಯದಲ್ಲಿ ದೊರೆಯುವ ಕಲ್ಲಿದ್ದಲು ಉತ್ಕಷ್ಟವಾದ್ದು. ಭಾರತದ ಕಲ್ಲಿದ್ದಲ ಉತ್ಪತಿಯಲ್ಲಿ ಅರ್ಧ ಇಲ್ಲಿಯದು. ಕಬ್ಬಿಣ, ಕ್ರೋಮಿಯಮ್, ಮ್ಯಾಂಗನೀಸ್, ತಾಮ್ರ, ಸತು, ಸುಣ್ಣಕಲ್ಲು, ಕಲ್ನಾರು, ಕೆವೊಲಿನ್ ಮಣ್ಣು ಮೊದಲಾದ ಅನೇಕ ಖನಿಜ ನಿಕ್ಷೇಪಗಳು ಇವೆ.

	ರಾಂಚಿಯೇ ಇಲ್ಲಿಯ ಶೈಕ್ಷಣಿಕ ಮತ್ತು ಆಡಳಿತ ಕೇಂದ್ರ. ಇಲ್ಲಿಯೇ ಅರಗು ಸಂಶೋಧನಾಲಯ, ಬೊಂಬೆಗಳ ಕಾರ್ಖಾನೆಗಳು, ಬೃಹತ್ ಔದ್ಯಮಿಕ ಉಪಕರಣಗಳ ಕಾರ್ಖಾನೆ, ಪಿಂಗಾಣಿ ಕಾರ್ಖಾನೆ ಮೊದಲಾದವು ನೆಲೆಗೊಂಡಿವೆ. ಡಾಲ್ಮಿಯ ನಗರದಲ್ಲಿನ ಸಿಮೆಂಟ್ ಮತ್ತು ಕಾಗದದ ಕಾರ್ಖಾನೆಗಳು, ಜಮ್ಷೆಡ್‍ಪುರದ ಉಕ್ಕಿನ ಸ್ಥಾವರಗಳು, ತಾಮ್ರ ಮತ್ತು ಅಲ್ಯೂಮಿನಿಯಮ್ ಕಾರ್ಖಾನೆಗಳು, ಸಿಂಧ್ರಿಯ ರಾಸಾಯನಿಕ ಗೊಬ್ಬರ ಕಾರ್ಖಾನೆ, ಗೊಮಿಯದಲ್ಲಿಯ ಸ್ಫೋಟಕ ವಸ್ತುಗಳ ಕಾರ್ಖಾನೆ, ಬೊಕಾರೊ ಉಕ್ಕಿನ ಕಾರ್ಖಾನೆ ಹಾಗೂ ವಿದ್ಯುತ್ ಸ್ಥಾವರಗಳು ಮುಖ್ಯವಾದವು.
(ವಿ.ಜಿ.ಡಿ.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ